ನಮ್ಮ ಬಗ್ಗೆ
ಸಾರಿಗೆ ಸಚಿವಾಲಯದ ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆ ಮತ್ತು ನಾಲ್ಕು ರಾಜ್ಯ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿ. (ಡಿಡಿಯುಟಿಟಿಎಲ್) ಸಂಸ್ಥೆ ಕಾರ್ಯನಿರ್ವಹಿಸುತ್ತವೆ.
ಸಾರಿಗೆ ಇಲಾಖೆ:
ಸಾರಿಗೆ ಇಲಾಖೆಯು ರಾಜಸ್ವ ಸಂಗ್ರಹಣೆ, ರಸ್ತೆ ಸುರಕ್ಷತೆ, ಸಂಚಾರ ನಿಯಂತ್ರಣ ಕಾರ್ಯಗಳನ್ನು ಈ ಕೆಳಕಂಡ ಮೋಟಾರು ವಾಹನಗಳ ಕಾಯ್ದೆ ಮತ್ತು ನಿಯಮಗಳನ್ನು ಜಾರಿಮಾಡುವ ಮೂಲಕ ಕ್ರಮಬದ್ಧವಾಗಿ ನಿಯಂತ್ರಿಸುವ ಅಧಿಕಾರ ಹೊಂದಿರುತ್ತದೆ.
- ಮೋಟಾರು ವಾಹನಗಳ ಕಾಯ್ದೆ, 1988 (1988ನೇ ಕೇಂದ್ರ ಕಾಯ್ದೆ 59)
- ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989
- ಕರ್ನಾಟಕ ಮೋಟಾರು ವಾಹನ ನಿಯಮಗಳು, 1989
- ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ, 1957 (1957ನೇ ಕರ್ನಾಟಕ ಕಾಯ್ದೆ, 35)
- ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿಯಮಗಳು, 1957.
ಸಾರಿಗೆ ಸಂಸ್ಥೆಗಳು:
ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950 ರನ್ವಯ ರಾಜ್ಯ ಸಾರಿಗೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರದಲ್ಲಿ ಅಗ್ರಮಾನ್ಯ ಸಾರಿಗೆ ಸಂಸ್ಥೆಗಳಾಗಿ ಹೊರಹೊಮ್ಮಿರುತ್ತವೆ. ರಾಜ್ಯದಲ್ಲಿನ ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದು ಸಾರಿಗೆ ನಿಗಮಗಳ ಪ್ರಮುಖ ಉದ್ದೇಶ ಹಾಗೂ ಜವಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಸಂಪರ್ಕ ಮತ್ತು ನಿರ್ವಹಣೆಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ, ಬಸ್್ ಘಟಕ ಮತ್ತು ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ಪ್ರಮುಖ ಕಾರ್ಯವಾಗಿರುತ್ತದೆ.
ಸಾಮಾಜಿಕ ಹೊಣೆಗಾರಿಕೆಯಡಿ ವಿದ್ಯಾರ್ಥಿಗಳಿಗೆ ರಿಯಾಯಿತಿ / ಉಚಿತ ಬಸ್ ಪಾಸ್ ಗಳನ್ನು ವಿತರಿಸಲಾಗುತ್ತಿದೆ ಹಾಗೂ ಅಂಧರಿಗೆ ಮತ್ತು ವಿಕಲಚೇತನರಿಗೆ, ಸ್ವಾತಂತ್ರ್ಯ ಯೋಧರಿಗೆ, ಹುತಾತ್ಮ ಯೋಧರ ಅವಲಂಬಿತರಿಗೆ, ಗೋವಾ ಚಳುವಳಿಗಾರರಿಗೆ ಮತ್ತು ಎಂಡೋಸಲ್ಫಾನ್ ಪೀಡಿತರಿಗೆ ಉಚಿತ / ರಿಯಾಯಿತಿ ಬಸ್ ಪಾಸ್ ಗಳನ್ನು ಸಹ ವಿತರಿಸಲಾಗುತ್ತಿದೆ. ಹಿರಿಯ ನಾಗರೀಕರ ಪ್ರಯಾಣ ದರದಲ್ಲಿ ಶೇ.25 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯ ಸಾರಿಗೆ ಸಂಸ್ಥೆಗಳನ್ನು ಈ ಕೆಳಕಂಡ ನಾಲ್ಕು ಸಾರಿಗೆ ಸಂಸ್ಥೆಗಳನ್ನಾಗಿ ವಿಭಜಿಸಲಾಗಿದೆ.
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ರಾಜ್ಯದ ಅಗ್ರಗಣ್ಯ ಸಾರಿಗೆ ನಿಗಮವಾಗಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಮಂಗಳೂರು, ಹಾಸನ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣೆಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಮತ್ತು ಕೋಲಾರ ಒಟ್ಟು 17 ಜಿಲ್ಲೆಗಳ ಆಡಳಿತ ವ್ಯಾಪ್ತಿಯನ್ನು ಹೊಂದಿರುತ್ತದೆ.
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ 25 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಿಕೊಡುವ ಜವಾಬ್ದಾರಿ ಹೊಂದಿರುತ್ತದೆ.
- ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ:
ವಾ.ಕ.ರ.ಸಾ.ಸಂಸ್ಥೆಯು ಹುಬ್ಬಳ್ಳಿ ಕೇಂದ್ರಸ್ಥಾನವನ್ನು ಒಳಗೊಂಡಂತೆ ಧಾರವಾಡ, ಬೆಳಗಾವಿ, ಗದಗ್ ಹಾವೇರಿ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಆಡಳಿತ ವ್ಯಾಪ್ತಿಯನ್ನು ಹೊಂದಿರುತ್ತದೆ.
- ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ:
ಈ.ಕ.ರ.ಸಾ.ಸಂಸ್ಥೆಯು ಕಲಬುರಗಿ ಕೇಂದ್ರಸ್ಥಾನವನ್ನು ಒಳಗೊಂಡಂತೆ ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳ ಆಡಳಿತ ವ್ಯಾಪ್ತಿಯನ್ನು ಹೊಂದಿರುತ್ತದೆ.
- ಡಿ. ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್:
ರಾಜ್ಯದ ನಗರಗಳ ಹೊರವಲಯಗಳಲ್ಲಿ ಲಾರಿ/ಟ್ರಕ್ಗಳ ನಿರ್ವಹಣೆದಾರರಿಗೆ ಪ್ರತ್ಯೇಕವಾದ ತಂಗುದಾಣ ಹಾಗೂ ಸರಕುಗಳನ್ನು ಏರಿಳಿಸುವ ವ್ಯವಸ್ಥೆ, ನಗರಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ, ಅಪಘಾತಗಳನ್ನು ತಡೆಗಟ್ಟುವ ಮತ್ತು ರಸ್ತೆಗಳಿಗೆ ಆಗುವ ಹಾನಿಗಳನ್ನು ಹಾಗೂ ವಾಯುಮಾಲಿನ್ಯವನ್ನು ತಡೆಗಟ್ಟುವ, ಲಾರಿಗಳ ಸಿಬ್ಬಂದಿಗಳಿಗೆ ತಂಗುದಾಣ ಮತ್ತು ಲಾರಿ ಏಜೆಂಟುಗಳಿಗೆ ಸ್ಥಳವಕಾಶ ಒದಗಿಸುವ ಉದ್ದೇಶ ಹೊಂದಿರುತ್ತದೆ.